ಸಂಶೋಧಕರು
ದೇಸಾಯಿ ಪಿ.ಬಿ., 1910-1976

ಶಾಸನಶಾಸ್ತ್ರಜ್ಞ, ಇತಿಹಾಸಕಾರ ಮತ್ತು ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಸಂಶೋಧಕರಾದ ಪಾಂಡುರಂಗ ಭೀಮರಾವ್ ದೇಸಾಯಿಯವರು, ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ. ಅವರು, ಗುಲ್ಬರ್ಗ ಜಿಲ್ಲೆಯ ಗುರುಮಿಟ್ಕಲ್ ಎಂಬ ಊರಿನಲ್ಲಿ ಹುಟ್ಟಿ, ಸೇಡಂ ಮತ್ತು ಗುಲ್ಬರ್ಗಗಳಲ್ಲಿ ಮೊದಲ ಹಂತದ ಶಿಕ್ಷಣವನ್ನು ಪಡೆದರು. 1935 ರಲ್ಲಿ, ಮುಂಬಯಿ ವಿಶ್ವವಿದ್ಯಾಲಯದಿಂದ, ಸಂಸ್ಕೃತದಲ್ಲಿ ಬಿ.ಎ.(ಆನರ್ಸ್) ಪದವಿಯನ್ನು ಪಡೆದ ದೇಸಾಯಿಯವರು, ಅದೇ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತ ವಿಷಯಗಳಲ್ಲಿ ಎಂ.ಎ. ಪದವಿಗಳನ್ನು ಪಡೆದರು. ಅವರ ಮೊದಲ ಉದ್ಯೋಗ, ಭಾರತ ಸರ್ಕಾರದ ಪುರಾತತ್ವ ಇಲಾಖೆಯ, ಶಾಸನಶಾಸ್ತ್ರ ವಿಭಾಗದಲ್ಲಿ ಸಹಾಯಕ ಸಂಶೋಧಕನ ಕೆಲಸ. ಅವರ ಕೇಂದ್ರ ಕಚೇರಿಯು ಉದಕಮಂಡಲದಲ್ಲಿ(ಊಟಿ) ಇತ್ತು. ಅವರು, ಅನೇಕ ಮುಖ್ಯ ಯೋಜನೆಗಳ ಕಾರ್ಯಭಾರವನ್ನು ವಹಿಸಿಕೊಂಡಿದ್ದರು. 1957ರಲ್ಲಿ, ದೇಸಾಯಿಯವರು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತದ ಇತಿಹಾಸ ಮತ್ತು ಸಂಸ್ಕೃತಿವಿಭಾಗದಲ್ಲಿ ಕೆಲಸಕ್ಕೆ ಸೇರಿದರು. 1971ರಲ್ಲಿ ಪ್ರಾಧ್ಯಾಪಕ ಮತ್ತು ವಿಭಾಗಮುಖ್ಯರಾಗಿ ನಿವೃತ್ತರಾದರು. ಅವರು, ಕನ್ನಡ, ಮರಾಠಿ, ಇಂಗ್ಲಿಷ್, ಉರ್ದು ಮತ್ತು ಸಂಸ್ಕೃತಗಳನ್ನು ಚೆನ್ನಾಗಿ ಬಲ್ಲ ಬಹುಭಾಷಾವಿದರಾಗಿದ್ದರು.

ಶಾಸನಗಳಲ್ಲಿನ ಅವರ ಆಸಕ್ತಿಯು ಬಾಲ್ಯದಲ್ಲಿಯೇ ಒಡಮೂಡಿದ್ದು. ಅವರು, ತನ್ನ ಸ್ವಂತ ಹಳ್ಳಿಯಾದ, ರಾಯಚೂರು ಜಿಲ್ಲೆಯ ಕುಕನೂರಿನ ಪರಿಸರದಲ್ಲಿ ಸುಮಾರು 200 ಶಾಸನಗಳನ್ನು ಸಂಗ್ರಹಿಸಿದ್ದರು. ಭಾರತೀಯ ಲಿಪಿಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿದ ದೇಸಾಯಿಯವರು, ವಿವಿಧ ಪ್ರಾಚೀನ ಲಿಪಿಗಳನ್ನು ಕಲಿತು ಆ ಕ್ಷೇತ್ರದಲ್ಲಿಯೂ ಪರಿಣಿತರಾದರು. ಅವರಿಗೆ ದೇವಾಲಯಗಳ ವಾಸ್ತುಶಿಲ್ಪ, ಶಿಲ್ಪ ಮತ್ತು ಸ್ಮಾರಕಶಿಲೆಗಳ ಬಗ್ಗೆಯೂ ತೀವ್ರವಾದ ಆಸಕ್ತಿಯಿತ್ತು. ಇನ್ನೊಬ್ಬ ಪ್ರಸಿದ್ಧ ಶಾಸನಶಾಸ್ತ್ರಜ್ಞರಾದ ಎನ್. ಲಕ್ಷ್ಮೀನಾರಾಯಣರಾವ್ ಅವರ ಸಹಯೋಗದಲ್ಲಿ, ದೇಸಾಯಿಯವರು ಅನೇಕ ಮಹತ್ವದ ಸಂಶೋಧನೆಗಳನ್ನು ಮಾಡಿದರು. ಮುಂಬಯಿ ಕರ್ನಾಟಕಕ್ಕೆ ಸೇರಿದ ನಾಲ್ಕು ಜಿಲ್ಲೆಗಳು ಹಾಗೂ ಕೆಲವು ಚಿಕ್ಕ ಪುಟ್ಟ ಸಾಮಂತ ರಾಜ್ಯಗಳು ಅವರ ಕಾರ್ಯಕ್ಷೇತ್ರ. ಅವರು ಸುಮಾರು ಒಂದು ಸಾವಿರದಷ್ಟು ಕನ್ನಡ, ತೆಲುಗು ಮತ್ತು ತಮಿಳು ಶಾಸನಗಳನ್ನು ಕಂಡುಹಿಡಿದರು. ‘Inscrptions of South India’ (ದಕ್ಷಿಣ ಭಾರತದ ಶಾಸನಗಳು) ಎಂಬ ಸಂಪುಟ ಸರಣಿಯ ಹದಿನೈದನೆಯ ಸಂಪುಟವನ್ನು ಅವರು ಸಂಪಾದಿಸಿದರು. ಅದೇ ಸರಣಿಯ ಮೊದಲನೆಯ ಸಂಪುಟದ ಸಂಪಾದನ ಕಾರ್ಯದಲ್ಲಿ, ಎನ್. ಲಕ್ಷ್ಮೀನಾರಾಯಣ ರಾವ್ ಅವರಿಗೆ ನೆರವಾದರು. ಹೈದರಾಬಾದು ಪ್ರದೇಶದ ಶಾಸನಗಳ ಸಂಗ್ರಹಕಾರ್ಯದಲ್ಲಿ, ಅಲ್ಲಿನ ಸರ್ಕಾರಕ್ಕೆ ನೆರವು ನೀಡಿದರು. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವಾಗ, ಶಾಸನಗಳ ವ್ಯವಸ್ಥಿತವೂ ವೈಜ್ಞಾನಿಕವೂ ಆಧ್ಯಯನಕ್ಕೆ ತಳಹದಿ ಹಾಕಿದರು. ಧಾರಾವಾಡದಲ್ಲಿರುವ ಕನ್ನಡ ಸಂಶೋಧನ ಸಂಸ್ಥೆಯ ವಸ್ತುಸಂಗ್ರಹಾಲಯದ ಬೆಳವಣಿಗೆಗೆ ದೇಸಾಯಿಯವರು ಕಾರಣರಾದರು. ಕರ್ನಾಟಕದ ಬೌದ್ಧ ದೇವಾಲಯಗಳ ಬಗ್ಗೆ ಮಾಡಿದ ಅಧ್ಯಯನಗಳು ಮತ್ತು ಪಂಡರಪುರವನ್ನು ಕುರಿತು ಮಾಡಿದ ಸಂಶೋಧನೆಗಳಿಗಾಗಿಯೂ ಅವರು ಪ್ರಸಿದ್ಧರಾಗಿದ್ದಾರೆ. ಸ್ಥಳನಾಮಗಳಿಗೆ ಸಂಬಂಧಿಸಿದಂತೆಯೂ ದೇಸಾಯಿಯವರು ಕೆಲಸ ಮಾಡಿದ್ದಾರೆ.

ದೇಸಾಯಿಯವರು ಅನೇಕ ಪುಸ್ತಕಗಳು ಮತ್ತು ಲೇಖನಗಳನ್ನು ಬರೆದಿದ್ದಾರೆ. ಕನ್ನಡ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ಬರೆದಿರುವ ಸಂಶೋಧನ ಲೇಖನಗಳ ಸಂಖ್ಯೆಯು ನಾನೂರನ್ನು ಮೀರುತ್ತದೆ. ಅವು ಎಪಿಗ್ರಾಫಿಯಾ ಇಂಡಿಕಾ ಮುಂತಾದ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಅವರು ಬರೆದಿರುವ ಹಾಗೂ ಸಂಪಾದಿಸಿರುವ ಮುಖ್ಯ ಕೃತಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

  1. ವಿಜಯನಗರದ ಸಾಮ್ರಾಜ್ಯ, 1936
  2. ಶಾಸನ ಪರಿಚಯ, 1956
  3. ಕರ್ನಾಟಕದ ಕಳಚೂರಿಗಳು
  4. ಮಿಂಚಿದ ಮಹಿಳೆಯರು
  5. ಕನ್ನಡನಾಡಿನ ಶಾಸನಗಳು
  6. ಮದಗಜಮಲ್ಲ
  7. ಕುಂತಲೇಶ್ವರ
  8. ಶಿವಚರಿತ್ರ ಸಂಗ್ರಹ, (ಮರಾಠಿಯಲ್ಲಿ)
  9. Basaveshvara and his times’, 1968, Kannada Research Institute, Dharwar.
  10. ‘A History of Karnataka’ (With B.R. Gopal and S.H. Ritti)
  11. ‘Jainism in South India and some Jaina Epigraphs’ (D. Litt. degree from Karnatak University in 1961)
  12. ‘Inscriptons of South India’, Volume 1, Edited with N.L.Rao
  13. ‘Inscrptions of outh India’, Volume 15, Editor
  14. ‘A Corpus of Kannada Inscriptions in Hyderabad’, Editor
  15. ‘Kannada Inscriptions of Andhrapradesh’, Editor
  16. ‘selected Inscrptions of Andhrapradesh’, Editor
  17. ‘Descriptive Catalogue of the Manuscripts in the Kannada Research Institute’, (vol.5,6,7,8 and 9)

1970ರಲ್ಲಿ ದೇಸಾಯಿಯವರಿಗೆ, ‘Studies in Indian History and Culture’ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಯಿತು.

ಮುಖಪುಟ / ಸಂಶೋಧಕರು